ಬಡೇ ಗುಲಾಂ ಅಲಿಖಾನ್ -
	ಉತ್ತರಾದಿ ಸಂಗೀತ ವಿದ್ವಾಂಸರಲ್ಲಿ ಹೆಸರಾದವರು. ಹುಟ್ಟಿದ್ದು ಲಾಹೋರ್ ಬಳಿಯ ಒಂದು ಹಳ್ಳಿ-ಕುಸೂರ್‍ನಲ್ಲಿ. ಈಗದು ಪಾಕಿಸ್ತಾನಕ್ಕೆ ಸೇರಿದೆ. ಐದು ವರ್ಷದ ಬಾಲಕನಿರುವಾಗಲೆ ಸೋದರ ಮಾವ ಕಾಲೀಖಾನ್ ಅವರಿಂದ ಸಂಗೀತ ದೀಕ್ಷೆ ದೊರಕಿತು. ತಂದೆ ಅಲಿ ಭಕ್ಷ್‍ಖಾನ್ ಪಟಿಯಾಲ ದೊರೆಯ ಆಸ್ಥಾನ ವಿದ್ವಾಂಸರು ಮನೆತನವೆ ಗಾಯಕರದ್ದು.
ಖಾನ್ ಸಾಹೇಬರು ಸಾರ್ವಜನಿಕ ಸಂಗೀತಸಭೆಯಲ್ಲಿ ಭಾಗವಹಿಸಲು ಆರಂಭಿಸಿದುದು ಸ್ವಲ್ಪ ತಡಮಾಡಿಯೆ. 1939ರಲ್ಲಿ ಕಲ್ಕತ್ತೆಯ ಸಂಗೀತ ಮಹಾಸಭೆಯಲ್ಲಿ ಇವರು ನೀಡಿದ ಶಾಸ್ತ್ರೀಯ ಸಂಗೀತದಿಂದಾಗಿ ಇವರ ಖ್ಯಾತಿ ಭಾರತವನ್ನು ಬೆಳಗಿ ಆಚೆಗೂ ಪಸರಿಸಿತು. ತರುವಾಯ ಮುಂಬಯಿಯಲ್ಲಿ ಜರುಗಿದ ಇತರ ಕಾರ್ಯಕ್ರಮಗಳಂತೂ ರಸಿಕ ಜನರಿಗೆ ಹುಚ್ಚು ಹಿಡಿಸಿಬಿಟ್ಟುವು. ಪಟಿಯಾಲಾ ಘರಾಣಿಯ ಪತಾಕೆ ಆಫ್ಘಾನಿಸ್ತಾನದ ಕಾಬೂಲಿನಲ್ಲೂ ಹಾರಿತು.

	ಸ್ವರಮಾಧುರ್ಯ, ಸಲೀಸಾದ ಹಾಡುಗಾರಿಕೆ, ಮಂದ್ರ-ಮಧ್ಯಮ-ತಾರ ಸಪ್ತಕಗಳನ್ನು ನಿರಾಯಾಸವಾಗಿ ನಡೆಸಬಲ್ಲ ರಸವತ್ತಾದ ಕಂಠಶ್ರೀ, ಸ್ವರವೆತ್ತಿದರೆ ರೇಶಿಮೆಯ ನಯವಾದ ಎಳೆಯಧಾರೆ ಧಾರೆ. ತಮ್ಮದೇ ಆದ ಒಂದು ಶೈಲಿ. ರಚನೆಗಳ ರಸ-ಭಾವಗಳನ್ನು ಅನುಭವಿಸಿ, ಹದವಾಗಿ ಹಾಡುವ ಮೋಹಕತೆ ಇವು ಇವರ ವೈಶಿಷ್ಟ್ಯ. ಶಾಸ್ತ್ರೀಯ ಸಂಗೀತದಂತೆ ಲಘು ಶಾಸ್ತ್ರೀಯ ಠುಮರಿ, ಟಪ್ಪಾ, ಗಝಲ್, ದೌದ್ರಾ ಮೊದಲಾದ ಪ್ರಕಾರಗಳಲ್ಲೂ ಸಾಹೇಬರದು ಎತ್ತಿದ ಕೈ. ಸಂಗೀತ ಚಕ್ರವರ್ತಿಯೆನಿಸಿ ಕೊಂಡರೂ ಓದಿನ ವಿದ್ಯೆಯಲ್ಲಿ ಖಾನರು ನಿರಕ್ಷರಿ. ಬಾಲ್ಯದಿಂದಲೂ ಹೋರಾಟದ ಜೀವನವೇ. ತಂದೆ ಮತ್ತೊಂದು ಮದುವೆ ಮಾಡಿಕೊಂಡ ಮೇಲೆ ತಾಯಿ ಸೋದರರ ಹೊಟ್ಟೆ ತುಂಬಿಸಿ ತಮ್ಮ ಹೊಟ್ಟೆ ತುಂಬಿಕೊಳ್ಳುವ ಬಿಕ್ಕಟ್ಟಿನ ಪ್ರಸಂಗ. ಸಾರಂಗಿ ವಾದಕನಾಗಿ ಎಳೆಯ ಪ್ರಾಯದಲ್ಲೆ ಸಂಪಾದನೆಗೆ ಶುರು. ಅದು ಲಾಭಕರ ಎನಿಸಲಿಲ್ಲವಾಗಿ ಸ್ವಪ್ರಯತ್ನದಿಂದ ಶ್ರೇಷ್ಠ ಹಾಡುಗಾರರಾದರು.

	ಭಾರತ ವಿಭಜನೆಯಾದಾಗ ಮಕ್ಕಳು ನೌಕರಿಗಾಗಿ ಪಾಕಿಸ್ತಾನ ಸೇರಿದರೂ ಖಾನರು ಮಾತ್ರ ಭಾರತದಲ್ಲೇ ಉಳಿದುಕೊಂಡರು.

	ಸಾಹೇಬರು ತಮ್ಮ ಅನೇಕಾನೇಕ ಧ್ವನಿಮುದ್ರಿಕೆಗಳ ಮೂಲಕ ತಮ್ಮ ಸಂಗೀತದ ವೈವಿಧ್ಯ, ಮಾಧುರ್ಯ, ಸ್ವರಸಂಪತ್ತನ್ನು ಭಾರತಕ್ಕೆ ಕಾಣಿಕೆಯಾಗಿ ಸಲ್ಲಿಸಿದ್ದಾರೆ.

	ಇಂದಿಗೂ ಇವರ ಕೇದಾರ, ಮಾಲಕಂಸ, ಭೈರವಿ, ಕಾಮೋದ ರಾಗಗಳ ಧ್ವನಿ ಮುದ್ರಿಕೆಗಳು, ಇವರ ಗಝಲ್ ಠುಮರಿಗಳು ಸಂಗೀತಲೋಕದಲ್ಲಿ ಶಾಶ್ವತವಾಗಿ ಉಳಿಯುವಂಥವಾಗಿವೆ.

	ತಮ್ಮ 67ನೆಯ ವಯಸ್ಸಿನಲ್ಲಿ ಖಾನ್ ಪಾಶ್ರ್ವವೇದನೆಯಿಂದ ತೀರಿಕೊಂಡರು.
(ಎನ್.ಕೆ.ಕೆ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ